ಕೂಡ್ಲಿಗಿ ತಾಲ್ಲೂಕಿನ ರೈತ ಸಮುದಾಯ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತೀವ್ರ ಆತಂಕಕ್ಕೆ ಒಳಗಾಗಿದೆ. ಕೃಷಿ ಚಟುವಟಿಕೆಗಳಿಗೆ ಜೀವನಾಡಿಯಾಗಿರುವ ಮಳೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 20 ದಿನಗಳು ಕಳೆದರೂ ಬಿತ್ತನೆಗೆ ಅಗತ್ಯವಾದ ಹದವಾದ ಮಳೆ ಸುರಿಯದ ಕಾರಣ ರೈತರು ಮಳೆರಾಯನ ಆಗಮನಕ್ಕಾಗಿ ಕಾತರದಿಂದ ಕಾಯುವಂತಾಗಿದೆ. ಬೇಸಿಗೆಯ ಬಿಸಿಲಿನ ನಡುವೆಯೇ ರೈತರು ತಮ್ಮ ಜಮೀನುಗಳಲ್ಲಿ ಮಾಗಿ ಉಳಿಮೆ, ಆಳ ಉಳುಮೆ ಸೇರಿದಂತೆ ವಿವಿಧ ಕೃಷಿ ಪೂರ್ವ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಟ್ರ್ಯಾಕ್ಟರ್ ಮೂಲಕ ಹೊಲಗಳನ್ನು ಹದಗೊಳಿಸಿದ್ದು, ದುಬಾರಿ ಬೆಲೆಯ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳನ್ನು ಮುಂಚಿತವಾಗಿ ಖರೀದಿಸಿ ಸಿದ್ಧವಾಗಿಟ್ಟಿದ್ದಾರೆ. ಇನ್ನೂ ಕೆಲವರು ಮಳೆಯ ನಿರೀಕ್ಷೆಯಲ್ಲಿ ಬೀಜ, ಗೊಬ್ಬರ ಖರೀದಿಗೆ ಎದುರು ನೋಡುತ್ತಿದ್ದಾರೆ. ಆದರೆ ನಿರೀಕ್ಷಿತ ಸಮಯಕ್ಕೆ ಮಳೆ ಬಾರದ ಕಾರಣ ಬಿತ್ತನೆ ಕಾರ್ಯ ಆರಂಭಿಸಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ವೆಚ್ಚಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆ ರೈತರು ಸಾಲ ಮಾಡಿ ಬೀಜ, ರಸಗೊಬ್ಬರ ಹಾಗೂ ಕಳೆನಾಶಕಗಳನ್ನು ಖರೀದಿಸಿದ್ದಾರೆ. ಮಳೆ ತಡವಾದಂತೆ ಬಿತ್ತನೆ ಅವಧಿಯೂ ಮುಂದೂಡಲ್ಪಡುತ್ತಿದ್ದು, ಬೆಳೆ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ಹೆಚ್ಚಾಗಿದೆ. ವಿಶೇಷವಾಗಿ ಮೆಕ್ಕೆಜೋಳ, ಸೂರ್ಯಕಾಂತಿ, ಜೋಳ ಸೇರಿದಂತೆ ಮುಂಗಾರು ಬೆಳೆಗಳನ್ನು ಅವಲಂಬಿಸಿರುವ ರೈತರು ಹವಾಮಾನ ವೈಪರೀತ್ಯದಿಂದ ಚಿಂತಿತರಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಆಕಾಶದತ್ತ ದೃಷ್ಟಿ ನೆಟ್ಟು ಮೋಡಗಳ ಚಲನವಲನ ಗಮನಿಸುವುದು ಸಾಮಾನ್ಯವಾಗಿದ್ದು, ಕೆಲವು ದಿನಗಳಿಂದ ಮೋಡಗಳು ಕಾಣಿಸಿಕೊಂಡರೂ ಮಳೆಯಾಗಿ ಪರಿವರ್ತನೆಯಾಗದೇ ಇರುವುದರಿಂದ ರೈತರ ನಿರೀಕ್ಷೆ ನಿರಾಸೆಯಾಗುತ್ತಿದೆ. ಕೆಲವೆಡೆ ತುಂತುರು ಮಳೆಯಾಗಿದ್ದರೂ ಬಿತ್ತನೆಗೆ ಅಗತ್ಯವಾದಷ್ಟು ತೇವಾಂಶ ಭೂಮಿಯಲ್ಲಿ ಸಂಗ್ರಹವಾಗಿಲ್ಲ. ಮಳೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ವೇಳಾಪಟ್ಟಿಯಲ್ಲೂ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ರೈತರು ಕೃಷಿ ಇಲಾಖೆಯ ಸಲಹೆ ಪಡೆದು ಬೆಳೆ ಆಯ್ಕೆ ಹಾಗೂ ಬಿತ್ತನೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ. ಮುಂಗಾರು ಮಳೆ ಸಮಯಕ್ಕೆ ಬಾರದಿದ್ದರೆ ಬೆಳೆ ಇಳುವರಿ ಕುಸಿತ, ಆರ್ಥಿಕ ನಷ್ಟ ಹಾಗೂ ಸಾಲದ ಹೊರೆಯಂತಹ ಸಮಸ್ಯೆಗಳು ಮತ್ತಷ್ಟು ತೀವ್ರಗೊಳ್ಳುವ ಭೀತಿ ಎದುರಾಗಿದೆ. ಈಗಾಗಲೇ ಹಲವಾರು ವರ್ಷಗಳಿಂದ ಹವಾಮಾನ ವೈಪರೀತ್ಯದ ಹೊಡೆತ ಅನುಭವಿಸುತ್ತಿರುವ ರೈತರಿಗೆ ಈ ಬಾರಿಯ ಮಳೆ ವಿಳಂಬ ಹೊಸ ಆತಂಕ ಮೂಡಿಸಿದೆ. "ಹೊಲ ಸಿದ್ಧವಾಗಿದೆ, ಬೀಜ ಸಿದ್ಧವಾಗಿದೆ, ರಸಗೊಬ್ಬರವೂ ಸಿದ್ಧವಾಗಿದೆ. ಈಗ ರೈತನ ಕಣ್ಣು ಮಾತ್ರ ಆಕಾಶದತ್ತ ನೆಟ್ಟಿದೆ. ಮಳೆ ಬಂದರೆ ಬದುಕು ಹಸನಾಗುತ್ತದೆ, ಇಲ್ಲದಿದ್ದರೆ ಮತ್ತೆ ಸಂಕಷ್ಟದ ಚಕ್ರವೇ ಮುಂದುವರಿಯಲಿದೆ” ಎಂಬುದು ರೈತ ಸಮುದಾಯದ ನೋವಿನ ಮಾತಾಗಿದೆ. ಕೂಡ್ಲಿಗಿ ತಾಲ್ಲೂಕು ಸೇರಿದಂತೆ ಹೊಸಳ್ಳಿ, ಗುಡೇಕೋಟೆ ಹೋಬಳಿಗಳಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದ್ದರಿಂದ ಬಿತ್ತನೆ ನಡೆಸಿದ್ದರೂ, ಬಿತ್ತನೆಯಾದ ಬೀಜಗಳು ತೇವಾಂಶದ ಕೊರತೆಯಿಂದ ಮೊಳಕೆ ಒಡೆಯದೆ, ಪುನಃ ಬಿತ್ತನೆಗೆ ಮುಂದಾಗಿ ಕೈಸುಟ್ಟುಕೊಳ್ಳುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

- ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೂನ್ 20 ರಂದು ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಕೂಡ್ಲಿಗಿ ಪೊಲೀಸ್ ಉಪವಿಭಾಗ, ಪೊಲೀಸ್ ಠಾಣೆ, ತಾಲೂಕಾಡಳಿತ ಹಾಗೂ ವಿವಿಧ ಸಮುದಾಯಗಳ ಮುಖಂಡರು ಮತ್ತು ನಾಗರಿಕರ ಸಹಯೋಗದಲ್ಲಿ ಈ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಡಿ.ವೈ.ಎಸ್ಪಿ ಮಲ್ಲೇಶಪ್ಪ ದೊಡ್ಡಮನೆ ಅವರು, ಹಬ್ಬವು ಸಂಭ್ರಮದ ಸಂಕೇತವಾಗಿದ್ದು, ಯಾವುದೇ ಕಾರಣಕ್ಕೂ ಶಾಂತಿ ಭಂಗವಾಗಬಾರದು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಆಸ್ಪದವಿಲ್ಲ ಎಂದು ಸೂಚಿಸಿದರು. ಸರ್ವಜನಾಂಗದವರು ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕಿದ್ದು, ಮೊಹರಂ ಸುಲಲಿತವಾಗಿ ನಡೆಯಲು ಇಲಾಖೆಯು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳೊಂದಿಗೆ ಸಿದ್ಧತೆ ನಡೆಸಿದೆ ಎಂದು ತಿಳಿಸಿದರು. ಸಮುದಾಯಗಳ ಹಿರಿಯರು, ಪ್ರಭಾವಿಗಳು, ಪೋಷಕರು, ಮುಖಂಡರು, ಜನಪ್ರತಿನಿಧಿಗಳು ಮತ್ತು ಎಲ್ಲಾ ಸಮುದಾಯಗಳ ಪ್ರಮುಖರು ಇಲಾಖೆಯೊಂದಿಗೆ ಸಹಕರಿಸಬೇಕು ಹಾಗೂ ತಮ್ಮ ಯುವಕರನ್ನು ಹದ್ದುಬಸ್ತಿನಲ್ಲಿಟ್ಟು, ಹಬ್ಬದಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ತಿಳಿಹೇಳಬೇಕು ಎಂದು ಅವರು ಕರೆ ನೀಡಿದರು. ಶಾಂತಿ ಭಂಗ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಲ್ಲಿ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಡಿ.ವೈ.ಎಸ್ಪಿ ಕಠಿಣ ಎಚ್ಚರಿಕೆ ನೀಡಿದರು. ಹಬ್ಬದ ಸಂದರ್ಭದಲ್ಲಿ ಕೋಮುಗಲಭೆ, ದಂಗೆ, ದೊಂಬಿ, ಗುಂಪು ಘರ್ಷಣೆ, ಹೊಡೆದಾಟ, ಹಲ್ಲೆಗಳಂತಹ ದುಷ್ಕೃತ್ಯಗಳಲ್ಲಿ ಭಾಗಿಯಾದವರಿಗೆ ಮತ್ತು ಘಟನೆಗಳಿಗೆ ಕುಮ್ಮಕ್ಕು ನೀಡಿದವರಿಗೆ, ಉತ್ತೇಜಿಸಿದವರಿಗೆ ಅಥವಾ ಸಹಕರಿಸಿದವರಿಗೆ ಕಾನೂನಿನಲ್ಲಿ ಯಾವುದೇ ಕ್ಷಮೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಹಬ್ಬದ ಸಂದರ್ಭದಲ್ಲಿ ಯಾರೂ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಮತ್ತು ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಬೇಕು ಎಂದರು. ಶಾಂತಿ ಸೌಹಾರ್ದತೆಗೆ ಹೆಚ್ಚು ಆದ್ಯತೆ ನೀಡಬೇಕು ಮತ್ತು ನಾಗರಿಕರು, ಸರ್ವಧರ್ಮೀಯರು ಇಲಾಖೆಯೊಂದಿಗೆ ಎಲ್ಲಾ ರೀತಿಯಲ್ಲಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಹಬ್ಬದ ಸಂದರ್ಭದಲ್ಲಿ ಎಲ್ಲರ ನೆಮ್ಮದಿ ಕಾಪಾಡುವ ನಿಟ್ಟಿನಲ್ಲಿ, ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಕಾನೂನಿನ ಗಾಂಭೀರ್ಯ ಮತ್ತು ಪ್ರಭಾವದ ಬಗ್ಗೆ ಅರಿವು ಮೂಡಿಸಿ, ಸಂಯಮ, ಶಾಂತಿ ಹಾಗೂ ಸೌಹಾರ್ದತೆಯಿಂದ ವರ್ತಿಸುವಂತೆ ಜಾಗೃತಿ ಮೂಡಿಸಬೇಕು. ಪ್ರಭಾವಿಗಳು, ಸಂಘ ಸಂಸ್ಥೆಗಳ ಪ್ರಮುಖರು, ರಾಜಕಾರಣಿಗಳು, ಹಿರಿಯರು ಮತ್ತು ಮುಖಂಡರು ತಮ್ಮ ಯುವಕರನ್ನು ನಿಯಂತ್ರಣದಲ್ಲಿಟ್ಟು, ಇಲಾಖೆಯೊಂದಿಗೆ ಸಹಕರಿಸಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ವಹಿಸಬೇಕು ಎಂದರು. ಮೊಹರಂ ಹಬ್ಬ ಆಚರಣೆ ಹಾಗೂ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಭದ್ರತೆಯನ್ನು ಜರುಗಿಸಲಾಗಿದೆ. ಪ್ರಮುಖ ಬೀದಿಗಳು, ಧಾರ್ಮಿಕ ಕೇಂದ್ರಗಳ ಬಳಿ ಮತ್ತು ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅಗತ್ಯವಿರುವ ಕಡೆ ಮೀಸಲು ಪೊಲೀಸ್ ಪಡೆಯನ್ನು ನೇಮಿಸಿ ಸೂಕ್ತ ಬಿಗಿ ಭದ್ರತೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಗುಂಪು ಸೇರುವುದನ್ನು ನಿಷೇಧಿಸಿ ತೀವ್ರ ನಿಗಾ ವಹಿಸಲಾಗಿರುತ್ತದೆ ಎಂದು ಡಿ.ವೈ.ಎಸ್ಪಿ ತಿಳಿಸಿದರು. ಈ ಶಾಂತಿ ಸಭೆಯಲ್ಲಿ ತಹಶಿಲ್ದಾರರಾದ ವಿ.ಕೆ. ನೇತ್ರಾವತಿ ಹಾಗೂ ಸಿಪಿಐ ಪ್ರಹ್ಲಾದ್ ಆರ್ ಚನ್ನಗಿರಿ ಅವರು ಮಾತನಾಡಿದರು. ಹಲವು ಮುಖಂಡರು ತಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು. ಪಿಎಸ್ಐ ಸಿ ಪ್ರಕಾಶ ಸೇರಿದಂತೆ ಮುಸ್ಲಿಂ ಧರ್ಮದ ಪ್ರಮುಖರು, ವಿವಿಧ ಧರ್ಮಗಳ ಗುರುಗಳು, ವಿವಿಧ ಸಮುದಾಯಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪಟ್ಟಣದ ಹಿರಿಯರು, ನಾಗರಿಕರು, ವಿವಿಧ ಪಕ್ಷಗಳ ಪ್ರಮುಖರು ಮತ್ತು ಯುವಕರು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.4
- ಕೂಡ್ಲಿಗಿ ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಕಾರಣ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆರಾಯನ ಆಗಮನಕ್ಕಾಗಿ ತಾಲ್ಲೂಕಿನಾದ್ಯಂತ ವಿವಿಧ ಆಚರಣೆಗಳು ಮತ್ತು ಪೂಜೆಗಳನ್ನು ನಡೆಸಲಾಗುತ್ತಿದ್ದು, ಅದರ ಭಾಗವಾಗಿ ಶನಿವಾರ ಅಮ್ಮನಕೆರಿ ಗ್ರಾಮದಲ್ಲಿ ವಿಶೇಷ ಗುರ್ಜಿ ಪೂಜೆ ಸಲ್ಲಿಸಲಾಯಿತು. ಈ ಆಚರಣೆಯಲ್ಲಿ, ಜೋಳದ ರೊಟ್ಟಿ ಬೇಯಿಸುವ ಹಂಚಿನ ಮೇಲೆ ಸೆಗಣಿಯಿಂದ ತಯಾರಿಸಿದ ಗುರ್ಜಿಯನ್ನು ಒಬ್ಬ ಯುವಕನ ತಲೆಯ ಮೇಲೆ ಇಟ್ಟುಕೊಂಡು ಮನೆ ಮನೆಗೆ ಹೋಗಲಾಯಿತು. ಈ ವೇಳೆ ಮಹಿಳೆಯರು "ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ. ಹಳ್ಳಕೊಳ್ಳ ಸುತ್ತಾಡಿ ಬಂದೆ. ಕಾರ ಮಳೆಯೋ ಕಪ್ಪತ್ತ ಮಳೆಯೋ.. ಸುರಿ ಸುರಿ ಸುರಿಯೋ ಮಳೆರಾಯ, ಬಣ್ಣ ಕೊಡ್ತೀನಿ ಬಾರಲೇ ಮಳೆಯೇ ಸುಣ್ಣ ಕೊಡ್ತೀನಿ ಸುರಿಯಲೇ ಮಳೆಯೇ" ಎಂದು ಹಾಡುತ್ತಾ ಮಳೆಗಾಗಿ ಪ್ರಾರ್ಥಿಸಿದರು. ಅಮ್ಮನಕೆರಿ ಗ್ರಾಮದಲ್ಲಿ ಬೇಗ ಮಳೆ ಬರುವಂತೆ ಕೋರಿ ಈ ಗುರ್ಜಿ ಪೂಜೆಯನ್ನು ಆಚರಿಸಲಾಯಿತು.1
- ಬಳ್ಳಾರಿ ನಗರದ ಹವಾಂಭಾವಿ ಪ್ರದೇಶದಲ್ಲಿ ಅಕ್ರಮ ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಜಿಲ್ಲಾಡಳಿತವು ಪೊಲೀಸ್ ಭದ್ರತೆಯಲ್ಲಿ ಸರ್ವೇ ನಂ. 275ರಲ್ಲಿರುವ 1.33 ಎಕರೆ ಸರ್ಕಾರಿ ಜಾಗವನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದೆ. ಈ ಜಾಗದ ಮೌಲ್ಯ ಕೋಟ್ಯಾಂತರ ರೂಪಾಯಿ ಎಂದು ಅಂದಾಜಿಸಲಾಗಿದೆ. ಜಿಲ್ಲಾಡಳಿತವು ತೆರವುಗೊಳಿಸಿದ ಈ ಜಾಗದಲ್ಲಿ ಸರ್ಕಾರಿ ಸ್ವಾಮ್ಯದ ಫಲಕವನ್ನು ಅಳವಡಿಸಿದ್ದು, ಅಕ್ರಮವಾಗಿ ಒತ್ತುವರಿ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.1
- ಚಳ್ಳಕೆರೆ ತಾಲೂಕಿನ ರೈತ ಸಂಘಟನೆಗಳ ಮನವಿಗೆ ಸ್ಪಂದಿಸಿದ ಸರ್ಕಾರ, ಶೇಂಗಾ ಬಿತ್ತನೆ ಬೀಜದ ದರವನ್ನು ಕಡಿತಗೊಳಿಸಿದ್ದು, ಇದು ರೈತರಿಗೆ ಸಂತಸ ತಂದಿದೆ. ತಾಲೂಕಿನ ರೈತ ಸಂಘಟನೆಗಳ ಕೋರಿಕೆಯ ಮೇರೆಗೆ ಮಾನ್ಯ ಶಾಸಕ ಟಿ. ರಘುಮೂರ್ತಿಯವರು ಸರ್ಕಾರಕ್ಕೆ ಪತ್ರ ಬರೆದು ದರ ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಇದರ ಪರಿಣಾಮವಾಗಿ, ಸರ್ಕಾರವು ಪ್ರತಿ ಕ್ವಿಂಟಲ್ ಶೇಂಗಾ ಬಿತ್ತನೆ ಬೀಜದ ದರವನ್ನು ₹11,300 ರಿಂದ ₹10,800ಕ್ಕೆ ಇಳಿಸಿದೆ. ಸಾಮಾನ್ಯ ವರ್ಗದ ರೈತರಿಗೆ ₹1,400 ಸಹಾಯಧನ ದೊರೆಯಲಿದ್ದು, ಅವರು ತಮ್ಮ ಪಾಲಿನ ₹9,400 ಪಾವತಿಸಿ ಬಿತ್ತನೆ ಬೀಜ ಪಡೆಯಬಹುದಾಗಿದೆ. ಅದೇ ರೀತಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ₹2,100 ಸಹಾಯಧನ ದೊರೆಯಲಿದ್ದು, ಅವರು ಕೇವಲ ₹8,700 ಪಾವತಿಸಿ ಬಿತ್ತನೆ ಬೀಜವನ್ನು ಪಡೆಯಲು ಸಾಧ್ಯವಿದೆ. ಸಹಾಯಕ ಕೃಷಿ ನಿರ್ದೇಶಕ ಡಾ. ಎಸ್.ಟಿ. ರಮೇಶ್ ಅವರು, ಶೇಂಗಾ ಬೆಳೆ ಬೆಳೆಯುವ ರೈತರು ಸರ್ಕಾರದ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಶಾಸಕರ ಮನವಿಗೆ ಸ್ಪಂದಿಸಿ ಸರ್ಕಾರವು ಶೇಂಗಾ ಬಿತ್ತನೆ ಬೀಜದ ದರ ಕಡಿತಗೊಳಿಸಿರುವುದು ರೈತರಿಗೆ ದೊಡ್ಡ ನಿರಾಳತೆ ತಂದಿದೆ.1
- ಚಿತ್ರದುರ್ಗದ 2ನೇ ಜಿಲ್ಲಾ ಸತ್ರ ನ್ಯಾಯಾಲಯವು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ. ಈ ಕುರಿತು ಶುಕ್ರವಾರ ರಾತ್ರಿ 8:30 ಕ್ಕೆ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಚಳ್ಳಕೆರೆ ತಾಲ್ಲೂಕಿನ ಎನ್.ಗೌರೀಪುರ ಗ್ರಾಮದಲ್ಲಿ ಶ್ರೀ ಉಮಾ ಮಹೇಶ್ವರ ದೇವರ ಕಾರ್ತಿಕೋತ್ಸವದ ಸಂದರ್ಭದಲ್ಲಿ ಆದಿಕರ್ನಾಟಕ ಜಾತಿಗೆ ಸೇರಿದ ಡಿ.ಓಬಣ್ಣ ಮತ್ತು ಇತರರು ದೇವರಿಗೆ ಡ್ರಮ್, ವಾದ್ಯ ಹಾಗೂ ತಮಟೆಗಳಿಂದ ಸೇವೆ ಸಲ್ಲಿಸುತ್ತಿದ್ದ ವೇಳೆ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ, ಲಿಂಗಾಯತ ಜಾತಿಗೆ ಸೇರಿದ ಆರೋಪಿಗಳು ಜಾತಿ ನಿಂದನೆ ಮಾಡಿ, ಕೈಕಾಲುಗಳಿಂದ ಹಲ್ಲೆ ನಡೆಸಿದ್ದರು ಎಂದು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಚಳ್ಳಕೆರೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀಧರ ವೆಂಕಟರಮಣ ಶೆಟ್ಟಿ ಅವರು ಕೈಗೊಂಡಿದ್ದರು. ಅವರು ಆರೋಪಿಗಳನ್ನು ಬಂಧಿಸಿ, ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಇದೀಗ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾಯಾಲಯವು ನಾಲ್ವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.1
- ಗದಗ್ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕೊಂಚಿಗೇರಿ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಅಳವಡಿಸಲಾಗಿರುವ ಹೈ ಮಾಸ್ಕ್ ದೀಪ ಇಂದಿಗೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಹೈ ಮಾಸ್ಕ್ ದೀಪ ಸರಿಯಾಗಿ ಆನ್ ಆಗದಿರುವುದು ಮುಖ್ಯ ಸಮಸ್ಯೆಯಾಗಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಅವರು 'ನೋಡೋಣ' ಎಂದು ಹೇಳಿ ನಿರ್ಲಕ್ಷ್ಯ ತೋರುತ್ತಿದ್ದಾರೆ.1
- ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಅರಬಗೊಂಡ ಗ್ರಾಮದ ಹತ್ತಿರವಿರುವ ಹಾವೇರಿ ಜಿಲ್ಲಾ ಹಾಲು ಒಕ್ಕೂಟದ ಮೇಗಾ ಡೈರಿ ಘಟಕಕ್ಕೆ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಕೆ.ಎಂ.ಎಫ್. ಅಧ್ಯಕ್ಷರಾದ ಶ್ರೀ ಮಂಜನಗೌಡ ಪಾಟೀಲ್, ಉಪಾಧ್ಯಕ್ಷರಾದ ಶ್ರೀ ಉಜ್ಜನಗೌಡ ಮಾವೀನತೋಪ, ಎಂ.ಡಿ. ಶ್ರೀ ಪ್ರದೀಪ ಎಸ್.ಎಂ. ಸೇರಿದಂತೆ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.4
- ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಮ್ಮನಕೇರಿ ಗ್ರಾಮದಲ್ಲಿ, ಮಳೆಗಾಗಿ 'ಗೊರ್ಜೆವ್ವ' (ಗೌರವ್ವ) ಹೊತ್ತ ಮಕ್ಕಳಿಗೆ ಗಂಗೆ ಪೂಜೆ ನೆರವೇರಿಸಲಾಯಿತು. ಗೊರ್ಜೆವ್ವಳ ಮೂರ್ತಿ ಹೊತ್ತ ಬಾಲಕ ಗ್ರಾಮದಾದ್ಯಂತ ಮನೆ ಮನೆಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ವರುಣ ದೇವರ ಕೃಪೆಗೆ ಪ್ರಾರ್ಥಿಸಲಾಯಿತು. 'ಗೊರ್ಜೆಮ್ಮ' ಅಥವಾ ಗೌರಮ್ಮ ಆರಾಧನೆಯು ಕರ್ನಾಟಕದ ಗ್ರಾಮೀಣ ಜಾನಪದ ಸಂಪ್ರದಾಯದ ಒಂದು ವಿಶಿಷ್ಟ ಭಾಗವಾಗಿದೆ. ಇದು ಮುಖ್ಯವಾಗಿ ಮಹಿಳಾ ಶಕ್ತಿಯ ಆರಾಧನೆಯನ್ನು, ಗ್ರಾಮೀಣ ಪಶುಪಾಲನಾ ಸಮುದಾಯಗಳ ಸಂಸ್ಕೃತಿಯನ್ನು ಪ್ರತಿಬಿಂಬಿಸುವ, ಪ್ರಕೃತಿ, ಕೃಷಿ ಮತ್ತು ದೈವಭಕ್ತಿಯ ಸಂಗಮವಾಗಿರುವ ಆಚರಣೆಯಾಗಿದೆ. ಕಲ್ಯಾಣ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಗೊರ್ಜೆವ್ವ ಆಚರಣೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಸಲಾಗುತ್ತದೆ. ಗೊರ್ಜೆವ್ವ (ಗೌರವ್ವ) ದೇವಿಯನ್ನು ಪಶುಪಾಲಕರ ಮತ್ತು ಅವರ ಜಾನುವಾರುಗಳ ರಕ್ಷಕಿಯಾಗಿ ಪೂಜಿಸಲಾಗುತ್ತದೆ. ಈ ಸಂದರ್ಭದಲ್ಲಿ, ಮಹಿಳೆಯರು, ಯುವತಿಯರು ಮತ್ತು ಮಕ್ಕಳು ಒಗ್ಗೂಡಿ ಅರಿಶಿನ, ಮಣ್ಣು ಮತ್ತು ನೈಸರ್ಗಿಕ ಸಾಮಗ್ರಿಗಳನ್ನು ಬಳಸಿ ಗೌರಮ್ಮಳ (ಗೊರ್ಜೆಮ್ಮ) ವಿಗ್ರಹವನ್ನು ಸರಳ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸುತ್ತಾರೆ. ಗೊರ್ಜೆವ್ವ ಉತ್ಸವವನ್ನು ರಾತ್ರಿ ಸಮಯದಲ್ಲಿ ಆಚರಿಸಲಾಗುತ್ತದೆ. ದೇವಿಯ ವಿಗ್ರಹವನ್ನು ಗ್ರಾಮದ ವಿವಿಧ ದೇವಾಲಯಗಳಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಮೆರವಣಿಗೆಯಲ್ಲಿ ಮಹಿಳೆಯರು ಕೈಯಲ್ಲಿ ತೈಲದೀಪಗಳನ್ನು ಹಿಡಿದು, ಹೂವುಗಳನ್ನು ಅರ್ಪಿಸಿ ಭಕ್ತಿಭಾವದಿಂದ ಸಾಗುತ್ತಾರೆ. ಹಬ್ಬದ ಪ್ರಮುಖ ಆಕರ್ಷಣೆಯಾಗಿ, ಪುರುಷ ಭಕ್ತರು ದೇವಿಯ ಮೇಲಿನ ಅಚಲ ಭಕ್ತಿಯ ಸಂಕೇತವಾಗಿ ಮುಖ್ಯ ದೇವಾಲಯದ ಎದುರು 'ಉರುಳು ಸೇವೆ' ಮಾಡುತ್ತಾರೆ. ಜಾನಪದ ಹಾಡುಗಳು ಮತ್ತು ಸೋಬಾನೆ ಪದಗಳ ಮೂಲಕ ಗೊರ್ಜೆವ್ವಳನ್ನು ಆರಾಧಿಸಲಾಗುತ್ತದೆ. ಮಹಿಳೆಯರು ವಿಶೇಷವಾಗಿ ಸೋಬಾನೆ ಪದಗಳನ್ನು ಹಾಗೂ ದೇವಿಯ ಮಹಿಮೆಯನ್ನು ಸಾರುವ ಜಾನಪದ ಗೀತೆಗಳನ್ನು ಹಾಡುತ್ತಾರೆ. "ಗಂಗಮ್ಮ ಗೌರಮ್ಮ" ಮುಂತಾದ ಭಕ್ತಿಗೀತೆಗಳನ್ನು ಹಾಡಿ, ಭಜನೆ ಮಾಡುವ ಮೂಲಕ ಮಳೆ ದೇವರನ್ನು ಆಹ್ವಾನಿಸಲಾಗುತ್ತದೆ. ಬಹುತೇಕ ಗ್ರಾಮೀಣ ಭಾಗಗಳಲ್ಲಿ, ಮಕ್ಕಳು ಅರೆಬೆತ್ತಲಾಗಿ ಮಣ್ಣಿನ ಗೊರ್ಜೆವ್ವಳನ್ನು ಕಟ್ಟಿಗೆಯ ಹಲಗೆಯ ಮೇಲೆ ಪ್ರತಿಷ್ಠಾಪಿಸಿಕೊಂಡು ವಿಶೇಷವಾಗಿ ಪೂಜಿಸುತ್ತಾರೆ. ಒಬ್ಬ ಅರೆಬೆತ್ತಲೆಯ ಬಾಲಕ ಅದನ್ನು ತನ್ನ ತಲೆಯ ಮೇಲೆ ಹೊತ್ತು ಗ್ರಾಮದ ಮನೆ ಮನೆಗೆ ತೆರಳಿ ಗೊರ್ಜೆವ್ವಳನ್ನು ಆರಾಧಿಸುತ್ತಾನೆ. ಮನೆಯ ಬಾಗಿಲಿಗೆ ಬಂದ ಗೊರ್ಜೆವ್ವಳಿಗೆ ಪೂಜೆ ಸಲ್ಲಿಸುವಂತೆ ಕೋರಲಾಗುತ್ತದೆ. ಮನೆಯವರು ಗೊರ್ಜೆವ್ವಳನ್ನು ಭಕ್ತಿಯಿಂದ ಸ್ವಾಗತಿಸಿ, ಹೊತ್ತವರಿಗೆ ಗಂಗಾಭಿಷೇಕ ಮಾಡಿ ನಮಿಸುತ್ತಾರೆ ಮತ್ತು ಆರಾಧಕರಿಗೆ ಧಾನ್ಯಗಳು ಹಾಗೂ ದಕ್ಷಿಣೆಯನ್ನು ನೀಡಿ ಕಳುಹಿಸಿಕೊಡುತ್ತಾರೆ. ಗೊರ್ಜೆವ್ವಳ ಆರಾಧಕರು ಜನರು ನೀಡಿದ ಧಾನ್ಯಗಳನ್ನು ಸಂಗ್ರಹಿಸಿ, ನಂತರ ಒಗ್ಗೂಡಿ ತಿಂಡಿ ತಿನಿಸುಗಳನ್ನು ತಯಾರಿಸಿ ಗೊರ್ಜೆವ್ವಳಿಗೆ ಎಡೆ ಮಾಡಿ ನಮಿಸುತ್ತಾರೆ. ನಂತರ ಶ್ರದ್ಧಾಭಕ್ತಿಯಿಂದ ಪ್ರಸಾದವನ್ನು ಸೇವಿಸುತ್ತಾರೆ. ಈ ಆರಾಧನೆಯಲ್ಲಿ ಬಾಲಕರು ಮತ್ತು ಬಾಲೆಯರ ದಂಡೇ ಭಾಗಿಯಾಗಿರುತ್ತದೆ. ಗೊರ್ಜೆವ್ವಳ ಆರಾಧಕರು ಗ್ರಾಮವೆಲ್ಲಾ ಅಲೆದಾಡಿದ ನಂತರ ಕೊನೆಗೆ ಗ್ರಾಮದಾಚೆಯ ದೇವಸ್ಥಾನದಲ್ಲಿ ತಂಗುತ್ತಾರೆ. ಇದು ಒಂದು ವಿಶಿಷ್ಟ ಮತ್ತು ವಿಶೇಷ ಜಾನಪದ ಆಚರಣೆಯಾಗಿದೆ.4